Friday, December 9, 2011
‘ದಿ ಡರ್ಟಿ ಪಿಚ್ಚರ್’?!
ಇವತ್ತು ‘ದಿ ಡರ್ಟಿ ಪಿಕ್ಚರ್’ ಸಿನೆಮಾವನ್ನು ನೋಡಿದೆ. ವಿದ್ಯಾಬಾಲನ್ ಅಭಿನಯಿಸಿದ ಈ ಚಿತ್ರದ ಬಗ್ಗೆ ಬಹಳ ಹೊಗಳಿಕೆಯ ಮಾತುಗಳನ್ನು ಕೇಳಿ ಬಹಳ ದಿನಗಳಿಂದ ಕಾದು ಅಂತೂ ಇವತ್ತು ಆ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು. ನೋಡಿ ಬಹಳ ನಿರಾಸೆಯಾಯಿತು. ದಕ್ಷಿಣ ಭಾರತದಲ್ಲಿ ತನ್ನ ಮಾದಕ ಅಭಿನಯಕ್ಕೆ ಹೆಸರಾದ ಸಿಲ್ಕ್ ಸ್ಮಿತಾ ಜೀವನಾಧಾರಿತ ಚಿತ್ರ ಎಂದು ಚಿತ್ರೀಕರಣ ಆರಂಭವಾಗುವಾಗ ಹೇಳಿಕೊಳ್ಳುತ್ತಿದ್ದ ಚಿತ್ರ ತಂಡ, ಅದು ಬಿಡುಗಡೆಯಾಗುವ ಸಂದರ್ಭದಲ್ಲಿ, ಇಲ್ಲ... ಇದು ಕೇವಲ ಸಿಲ್ಕ್ ಸ್ಮಿತಾ ರೀತಿಯ ಅಭಿನಯೇತ್ರಿ ಆಗುವ ಆಕಾಂಕ್ಷಿಗಳ ದುರಂತ ಕಥನ ಎಂದರು. ತಾವು ‘ಸೆಕ್ಸ್’ನ್ನೇ ಮಾರ್ಕೇಟಿಂಗ್ ಟೆಕ್ನಿಕ್ ಆಗಿ ಬಳಸುತ್ತೇವೆ ಎಂದೆಲ್ಲಾ ಹೇಳಿದರು. ಆದರೆ ಚಿತ್ರ ಅತ್ತ ಒಂದು ಜೀವನ ಕಥನದ ನಂಬಿಕಾರ್ಹತೆಯನ್ನೂ ಹೊಂದದೆ, ಇತ್ತ ಸಿನೆಮ್ಯಾಟಿಕ್ ಎನ್ನುವಂಥಾ ಮಂತ್ರಮುಗ್ಧವಾಗಿಸುವ ಕಥಾನಕವನ್ನೂ ಹೊಂದದೆ ಸೋಲುತ್ತದೆ.
ಸಿನೆಮಾ ಸೇರಲು ಬರುವಂಥಾ ಹುಡುಗಿಯರ ಕಥೆ ಎಂಥಾ ದುರಂತದ್ದಾಗಿರಬಹುದು ಎನ್ನುವುದನ್ನು ತೋರಿಸುವ ಅನೇಕ ಚಿತ್ರಗಳು ಭಾರತೀಯ ಸಿನೆಮಾ ಇತಿಹಾಸದಲ್ಲಿ ಆಗಿಂದಾಗ್ಗೆ ಬಂದಿವೆ. ಅನೇಕ ಕಥೆಗಳನ್ನು ಪತ್ರಿಕೆಗಳಲ್ಲಿ, ಟಿ.ವಿಯಲ್ಲಿ ನಾವು ನೋಡಿಯೂ ಇದ್ದೇವೆ. ಹೀಗಿರುವಾಗ ‘ದಿ ಡರ್ಟಿ ಪಿಕ್ಚರ್’ ಚಿತ್ರದ ವಸ್ತು ವಿಶೇಷವೇನೂ ಅನಿಸುವುದಿಲ್ಲ. ಎಂಭತ್ತರ ದಶಕದ ಕಥೆ ಎಂದು ಆರಂಭವಾಗುವ ಈ ಚಿತ್ರ ಆ ಕಾಲದ ನಿಜಗುಣಗಳನ್ನು ಎಲ್ಲೂ ತಟ್ಟದೇ ತಾನೊಂದು ‘ಕಮರ್ಶಿಯಲ್ ಚಿತ್ರ’ ಹಾಗಾಗಿ ನನ್ನನ್ನು ವಸ್ತು ನಿಷ್ಟತೆಗೆ ದೂರವಿಟ್ಟು ನೋಡಿ ಅನ್ನುತ್ತದೆ. ಹೀಗೆ ಒಂದು ಸಾಕ್ಷ್ಯಚಿತ್ರವೂ ಆಗದೇ ಒಂದು ಕಾಲ್ಪನಿಕ ಕಥಾ ಚಿತ್ರವೂ ಆಗದೇ ಸಿನೆಮಾ ಸೋಲುತ್ತದೆ.
ಚಿತ್ರದಲ್ಲಿ ಬರುವ ಅನೇಕ ಸಂಭಾಷಣೆಗಳು ಸಿಳ್ಳೆ ಪಡೆಯುತ್ತವೆ. ಆದರೆ ಈ ಸಿನೆಮಾ ಅದರ ಪಾತ್ರ ಸಿಲ್ಕ್ ನಂತೆ ಕೇವಲ ಸಿಳ್ಳೆ ಪಡೆಯುವೆಡೆಗೆ ತನ್ನ ಯೋಚನೆಗಳನ್ನು ಹರಿಬಿಟ್ಟಿದೆಯೇ ಹೊರತು ಪಾತ್ರದ ಆಳಕ್ಕೆ ಇಳಿದು ಅಲ್ಲಿ ಮಾನವ ಸಹಜ ಭಾವನೆಗಳನ್ನು ತಟುವುದಿಲ್ಲ. ತನ್ನ ಅನುಕೂಲಕ್ಕೆ ತಕ್ಕಂತೆ ಭಾವನೆಗಳನ್ನು ಮುಟ್ಟುವ ಸಂದರ್ಭ ಬಂದಾಗ ಒಂದೇ ದೃಶ್ಯದಲ್ಲಿ ಪಾತ್ರದ ಕಣ್ಣಲ್ಲಿ ಕಣ್ಣೀರು ಹುಟ್ಟಿಸಿ ಮುಂದೆ ಸಾಗುತ್ತದೆ. ನೀಲಚಿತ್ರ ಜಾಲಕ್ಕೆ ತನ್ನ ದುಸ್ಥಿತಿಯ ದಿನಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಸಿಲ್ಕ್ ಮುಂದಿನ ಕ್ಷಣದಲ್ಲೇ ತನ್ನ ಇಡೀ ಜೀವನವನ್ನು ಕಣ್ಣೆದುರೆ ಕಾಣುವುದು ಆ ಪಾತ್ರದ ಬೆಳವಣಿಗೆಯ ದೃಷ್ಟಿಯಿಂದ ತೀರಾ ಹಗುರವಾಗಿದೆ ಎನಿಸುತ್ತದೆ.
ಇನ್ನು ನಾಸಿರುದ್ದೀನ್ ಶಾಹ್ ಥರದ ಅನುಭವಿ ನಟನೂ ಪೇಲವವಾಗಿ ಕಾಣಿಸುವಂಥಾ, ಕಿಸ್ಸಿಂಗ್ ಕಿಂಗ್ ಎಂದೇ ಕರೆಯಲ್ಪಡುವ ಇಮ್ರಾನ್ ಸಿನೆಮಾದಲ್ಲಿ ಸೆಕ್ಸ್ ಎಂದರೆ ಹೇಸುವ ಪ್ರತಿಭಾನ್ವಿತ ನಿರ್ದೇಶಕನ ಪಾತ್ರದಲ್ಲಿ, ಕೇವಲ ನಿರ್ಮಾಪಕರ ತಮ್ಮ ಎಂಬ ಕಾರಣಕ್ಕೆ ಪಾತ್ರಗಿಟ್ಟಿಸಿರುವ ತುಶಾರ್ ಕಪೂರ್ ಇತ್ಯಾದಿ ಚಿತ್ರದಲ್ಲಿ ವಿಚಿತ್ರವಾಗಿ ಕಾಣಿಸುತ್ತಾರೆ. ನಾಸಿರುದ್ದೀನ್ ಶಾ ಹಾಗೂ ವಿದ್ಯಾಬಾಲನ್ ನಡುವೆ ಇಷ್ಕಿಯಾ ಚಿತ್ರದಲ್ಲಿ ಕಾಣುವ ನಂಬಲರ್ಹ ಸೆಳೆತ ಇಲ್ಲಿ ಮಾಯವಾದದ್ದಕ್ಕೆ ಕೇವಲ ಬಲಹೀನ ಚಿತ್ರಕಥೆಯೇ ಆರೋಪಿ.
ಹೀಗಿದ್ದರೂ ಈ ಚಿತ್ರವನ್ನು ನೋಡುವಾಗ, ಭಾರತೀಯ ಸಿನೆಮಾರಂಗವು ಪರದೆಯಲ್ಲಿ ಶೀಲ - ಅಶ್ಲೀಲತೆಯ ಪರಿಧಿಯನ್ನು ಪ್ರಶ್ನಿಸುತ್ತಿರುವುದು ಹಾಗೂ ತನ್ನ ನಿಲುವನ್ನು ಬದಲಿಸಿಕೊಳ್ಳುತ್ತಿರುವುದು ನಿಧಾನವಾಗಿಯಾದರೂ, ಸ್ಪಷ್ಟವಾಗಿ ಕಾಣಿಸುತ್ತಿದೆ. ಡೆಲ್ಲಿ-ಬೆಲ್ಲಿ ಚಿತ್ರದ ಅಶ್ಲೀಲ ಸಂಭಾಷಣೆಗಳಿರಬಹುದು, ಪರದೆಯ ಮೇಲೆ ಮುತ್ತಿನ ಮಳೆಗರೆಯುವ ಇಮ್ರಾನ್ ಥರದ ನಾಯಕನ ಜನನವಿರಬಹುದು ಹೀಗೆ ಭಾರತೀಯ ಸಿನೆಮಾ ಸೆಕ್ಸ್ ಬಗ್ಗೆ ತನ್ನ ನಿಲುವನ್ನು ಮರು-ವಿಶ್ಲೇಷಿಸುತ್ತಿರುವುದು ಕಾಣುತ್ತೇವೆ. ಯಾವುದೇ ರೀತಿಯ ಮಾರಲ್ ಪೋಲೀಸಿಂಗ್ ಮಾಡದೇ ಪ್ರೇಕ್ಷಕರಿಗೆ ತಮ್ಮ ಅಭಿಪ್ರಾಯವನ್ನು ತಾವೇ ರೂಪಿಸಿಕೊಳ್ಳಲು ಬಿಟ್ಟಲ್ಲಿ, ನೋಡುಗರ ಸಂಸ್ಕಾರಕ್ಕೆ ಹಾಗೂ ಚಿತ್ರ ನಿರ್ಮಿಸುವವರ ಸಂಸ್ಕಾರಕ್ಕೆ ತಕ್ಕಂತೆ (ಒಟ್ಟಿನಲ್ಲಿ ಸಮಾಜದ ಸಂಸ್ಕಾರಕ್ಕೆ ತಕ್ಕಂತೆ) ಭಾರತೀಯ ಸಿನೆಮಾ ಸಾಗುವುದರಲ್ಲಿ ಸಂಶಯವಿಲ್ಲ.
Subscribe to:
Post Comments (Atom)


ನಾನು ಚಲನಚಿತ್ರಗಳನ್ನು ನೋಡುವುದು ಬಲು ಅಪರೂಪ. ಈ ಚಿತ್ರ ನೋಡದಿದರೆ ಕಳೆದುಕೊಳ್ಳುವಂಥದ್ದು ಏನೂ ಇಲ್ಲ ೆಂಬುದನ್ನು ಲೇಖನದ ಮೂಲಕ ತಿಳಿಸಿದ್ದಕ್ಕೆ ಧನ್ಯವಾದಗಳು
ReplyDeleteಅಭಯ್,
ReplyDeleteಸಿಲ್ಕ್ ಬದುಕಿನ ಕಥೆಯನ್ನ ನೀವ್ ಹೇಳಿದ ಹಾಗೆ ಸಿನಿಮ ಮಾಡಿದ್ರೆ ಅದು ಆರ್ಟ್ ಸಿನಿಮ ಆಗ್ತಿತ್ತು. ಅಲ್ಲಿಗೆ ಜನ ನೋಡದೇ, ಸಿಲ್ಕ್ ಗೆ ಅವಮಾನ ಮಾಡಿದ ಹಾಗಾತಿತ್ತು.
ನಾನು ಸಿನಿಮಾ ನೋಡುವುದೇ ಬಿಟ್ಟಿದ್ದೇನೆ. ನೋಡಿದರೂ ಅನಾವಶ್ಯಕ ಹಾಡು ನರ್ತನ, ಸೆಕ್ಸ್ ವೈಭವೀಕರಿಸದ ಹಿಂಸೆಯನ್ನು ಪ್ರಚೋದಿಸದ ಮನಸ್ಸಿಗೆ ಮುದನೀಡುವ ಸರಳ ಕಥಾನಕದ ಚಿತ್ರಗಳನ್ನಷ್ಟೆ ನೋಡುವುದು. ಕನ್ನಡ ಅಥವಾ ಹಿಂದಿ ಚಿತ್ರಗಳಲ್ಲಂತು ಇದನ್ನು ಹುಡುಕಿದರೂ ಸಿಗುವುದಿಲ್ಲ. ಬರೀ ದುಡ್ದು ಮಾಡುವುದಕ್ಕಷ್ಟೇ ಸಿನಿಮಾ ಎಂಬಂತಾಗಿದೆ. ಅದಕ್ಕೆ ಭಾಷಾಭಿಮಾನ ಕಲಾಭಿಮಾನ ಎಂಬ ಗಿಮಿಕ್ ನ ನಕಲೀ ಬಣ್ಣದ ಲೇಪನ ಬೇರೆ. ನಾವು ಕೊಟ್ಟ ಟಿಕೇಟ್ ನ ದುಡ್ಡು ಇಂದು ನಟ ನಟಿಯರ ಮೋಜಿನ ಜೀವನಕ್ಕೆ ಪರೋಕ್ಷವಾಗಿ ವಿನಿಯೋಗವಾಗುವುದು ನೋಡಿದಾಗ ಹೇಸಿಕೆ ಎನಿಸುತ್ತದೆ. ಆ ನಟ ನಟಿಯರ ಅಭಿಮಾನಿ ಸಂಘ ಅದಕ್ಕೆ ಫೂಜೆ ಇದೆಲ್ಲ ನೋಡಿದಾಗ ಮೈ ಉರಿದು ವಾಕರಿಕೆ ಬರುವಂತಾಗುತ್ತದೆ. ಹೀಗಾಗಿ ನಮಗೆ ಮನರಂಜನೆ ಅವಶ್ಯ್ವವಿದ್ದಲ್ಲಿ ಬಡ ಕಲಾವಿದರಿಂದ ಪೋಷಿಸಲ್ಪಡುವ ಸರಳವಾದ ಜಾನಪದ ಯಕ್ಷಗಾನ ಕಲೆಯೇ ಧಾರಾಳ ಸಾಕು. ಮನಸ್ಸನ್ನು ಕೆರಳಿಸಿ ಮನಶ್ಯಾಂತಿಯನ್ನು ಕದಡುವ ಈ ಚಲನ ಚಿತ್ರಗಳ ಸಹವಾಸವೇ ಬೇಡ.
ReplyDeleteಪಕ್ಕದ ರಾಜ್ಯದ ಕೇರಳಿಗರ ಕ್ರಿಯೇಟಿವಿಟಿ ಅನುಸರಿಸಿಕೊಂಡು ಮಲಾಯಾಳ ಸಿನಿಮಾಗಳನ್ನು ಕೆಲವೊಮ್ಮೆ ನೋಡುವುದುಂಟು. ಇತ್ತೀಚೆಗೆ ನೋಡಿ.."ಒರು ನಾಳ್ ವರುಂ.." ಎಂಬ ಸಿನಿಮಾ, ಸಿನಿಮಾ ವಿಚಾರಕ್ಕೆ ಬಂದರೆ ಮಲಯಾಳಿಗರಿಂದ ಕಲಿವಂತಹುದು ಬಹಳವಿದೆ ಎನಿಸುತ್ತದೆ. ಅದು ಹಾಸ್ಯವಿರಲಿ, ಭಾವನಾತ್ಮಕವಾಗಿರಲಿ ಅಲ್ಲಿನ ಹೆಚ್ಚಿನ ಎಲ್ಲ ಕ್ರಿಯೇಟಿವಿಟಿಯುನ್ನು ನೋಡಿ ಬಾಕಿ ಉಳಿದವರು ಕಲಿವಂತಹುದು ಬಹಳ ಇದೆ. ಕನ್ನಡದವರಂತು ಬಹಳ ಬಹಳ ಇದೆ.
ಏನಿದ್ದರು ಅಲ್ಪ ಮಟ್ಟಿಗೆ ಚಲನಚಿತ್ರದ ಇಂದಿನ ಸ್ಥಿತಿಗತಿಯನ್ನು ಬಹಳ ಸರಳವಾಗಿ ವಿವರಿಸಿದ್ದಿರಿ. ತುಂಬ ಧನ್ಯವಾದಗಳು
ಮಾನ್ಯ ಅಭಯ್ ಸಿಂಹರವರೆ ಡರ್ಟಿ ಪಿಕ್ಚರ್ ಬಗೆಗೆ ತಾವು ಬರೆದಿರುವ ಲೇಖನ ಡರ್ಟಿ ಪಿಕ್ಚರ್ ಬಗೆಗೆ ಹೇಳುತ್ತಲೇ ಚಿತ್ರರಂಗ ಪೇಲವಗೊಳ್ಳುತ್ತಿರುವುದೇಕೆ ಎಂಬುದಕ್ಕೆ ಉತ್ತರವನ್ನೂ
ReplyDeleteಹೊಮ್ಮಿಸುತ್ತದೆ. ಇಂದಿನ ಬಹುತೇಕ ಸಿನೆಮಾಗಳಲ್ಲಿ ಭಾವನೆಗಳಿಗೆ ಜಾಗವಿಲ್ಲ. ಬಡ್ಜೆಟ್ ಅಷ್ತಾಯ್ತು ,ಇಷ್ಟಾಯ್ತು ಎಂದು ಹೇಳಿಕೊಳ್ಳುವುದೇ ಒಂದು ಹೆಚ್ಚುಗಾರಿಕೆಯಾಗಿದೆ. ದೃಶ್ಯ ಮಾಧ್ಯಮದ ಮಹತ್ವ ಗೊತ್ತಿಲ್ಲದವರು ಅಲ್ಲಿ ಹೇರಳವಾಗಿರುವುದರಿಂದಲೇ ಸಿನಿಮಾ ದಿಕ್ಕು ತಪ್ಪಿದೆ . ಅದೇನೇ ಆಗಲಿ ಸದ್ಯ ನಾನಂತೂ ,ನಾನೇ ಅಲ್ಲ ನನ್ನ ಅನೇಕ ಸ್ನೇಹಿತರು ಸಿನೆಮಾಗಳನ್ನು ನೋಡೋದನ್ನು ನಿಲ್ಲಿಸಿ ತುಂಬಾ ದಿನಗಳಾಯಿತು.ನಿಲ್ಲಿಸಿದೆವು ಅಂದ ಮಾತ್ರಕ್ಕೆ ನೋಡೋದೇ ಇಲ್ಲ ಅಂತ ಅಲ್ಲ , ಖುಷಿ ನೀಡಬಲ್ಲಂತಹ ಆಯ್ದ ಸಿನಿಮಾಗಳನ್ನು ನೋಡ್ತಿವಿ. ಸ್ನೇಹಿತರಿಗೂ ನೋಡಿ ಅಂತಿವಿ,ನಮಗಿಂತ ಅವರು ಮೊದಲು ನೋಡಿದ್ರೆ ಇಂತ ಸಿನಿಮಾ ಬಂದಿದೆ ಚನ್ನಾಗಿದೆ ಮಿಸ್ ಮಾಡಬೇಡ ನೋಡು ಅಂತ ಮೆಸೇಜ್ ಮಾಡ್ತಾರೆ(ಯಾವ ಭಾಷೆಯಾದ್ರು ಸರಿನೆ). ಇತ್ತೀಚೆಗೆ ಪುನೀತ್ ಸಿನಿಮಾ ಅಂತ ಇಷ್ಟಪಟ್ಟು ಚನ್ನಾಗಿರಬಹುದು (ಮಾತಿಗೆ ಬ್ರೇಕ್ ಬಿದ್ದು ದೃಶ್ಯಕ್ಕೆ ಅವಕಾಶ ವಿರುತ್ತೆ ಅಂದುಕೊಂಡು) ಎಂದು 'ಪರಮಾತ್ಮ' ಸಿನೆಮಾಗೆ ಹೋದರೆ ಬಹಳ ನಿರಾಸೆಯಾಗಿಹೋಯ್ತು. ಹೀಗೆ ಈಗಿನ ಅನೇಕ ನಿರ್ದೇಶಕರು ಜನರನ್ನು ರಂಜಿಸುವುದಕ್ಕಿಂತ ಬೇಸರಗೊಳಿಸುವುದೇ ಹೆಚ್ಚು. ಒಂದು ಚಿತ್ರ ಗೆದ್ದ ಮಾತ್ರಕ್ಕೆ ಅದೇ ಧಾಟಿಯಲ್ಲೇ ಸಾಗೊದಕ್ಕೆ ಅವರಿಗಾದ್ರು ಬೇಸರವಾಗಲ್ಲವೇ? ನನ್ನ ಸ್ನೇಹಿತ ಪೊರಾಳಿ(ತಮಿಳ್)ಚನ್ನಾಗಿದೆ ನೋಡು ಅಂತ ಮೆಸಜ್ ಮಾಡಿದ್ದ.ಕನ್ನಡ ಸಿನೆಮಾಗಳೂ ಹಾಗೆ ಜನರು ಆನಂದಿಸುವಂತೆ ಮೂಡಿಬಂದರೆ ಅವುಗಳ ಕಡೆಗೂ ಆಕರ್ಷಿತರಾಗುತ್ತಾರೆ ಅಲ್ಲವೇ. ನೋಡಿ ಖುಷಿಪಡುವಂತ ಕನ್ನಡ ಸಿನೆಮಾಗಳು ಬರುತ್ತಿಲ್ಲವಲ್ಲ ಎಂದು ಅನೇಕರು ಬೇಸರಗೊಂಡು ಧಾರಾವಾಹಿಗಳನ್ನು ನೋಡಿಕೊಂಡು ಬೇಸರ ಮರೆಯುತ್ತಿದ್ದಾರೆ.ಅದನ್ನು ಸಿನೆಮಾ ಪಂಡಿತರು ಅರ್ಥ ಮಾಡಿಕೊಳ್ಳಲಿ.
ಸಿನಿಮಾ ಎಂದರೆ ಕೇವಲ ಕುಣಿತ ,ಹೊಡೆತ ,ಬಣ್ಣ ಬಣ್ಣದ ಬ್ಯಾಕ್ ಗ್ರೌಂಡು ಅಷ್ಟೇ ಅಲ್ಲ ಎನ್ನುವುದನ್ನೂ ಅರ್ಥೈಸಿಕೊಳ್ಳಲಿ .ಒಂದೊಳ್ಳೆ ಸಿನಿಮಾ ಕೊಡಲಿ ಮುಗಿಬಿದ್ದು ನೋಡೋದಕ್ಕೆ ಕೋಟ್ಯಂತರ ಜನರಿದ್ದಾರೆ .
ಅದು ಬಿಟ್ಟು ತನಗಿಷ್ಟ ಬಂದಂತೆ ರೀಲು ಸುತ್ತಿ ನಂ ಸಿನಿಮಾ ಓಡಲಿಲ್ಲ ಎಂದರೆ ಹೇಗೆ ?
A dirty story ಎಂಬ ಪ್ರೆಂಚ್ ಸಿನಿಮಾ ಇದೆ ಅದನ್ನು ಹುಡುಕಿ, ನೋಡಿ.
ReplyDeleteವಿ.ಎನ್.ಲಕ್ಷ್ಮೀನಾರಾಯಣ